ಮಾರ್ಕ 4
  • 1 ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.
  • 2 ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
  • 3 ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
  • 4 ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
  • 5 ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;
  • 6 ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಬೇರಿಲ್ಲದ ಕಾರಣ ಒಣಗಿಹೋದವು;
  • 7 ಮತ್ತೆ ಕೆಲವು ಮುಳ್ಳು ಗಳಲ್ಲಿ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
  • 8 ಕೆಲವು ಒಳ್ಳೇ ನೆಲದ ಮೇಲೆ ಬಿದ್ದು ಮೊಳೆತು ಬೆಳೆಯುತಾ ಕೆಲವು ಮೂವತ್ತರಷ್ಟು, ಅರವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.
  • 9 ಆತನು ಅವರಿಗೆ ಹೇಳಿದ್ದೇನಂದರೆ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
  • 10 ಆತನು ಒಬ್ಬನೇ ಇದ್ದಾಗ ಆತನ ಸುತ್ತಲೂ ಇದ್ದವರು ಹನ್ನೆರಡು ಮಂದಿಯೊಂದಿಗೆ ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
  • 11 ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.
  • 12 ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
  • 13 ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
  • 14 ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
  • 15 ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.
  • 16 ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ
  • 17 ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
  • 18 ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ
  • 19 ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
  • 20 ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
  • 21 ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
  • 22 ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.
  • 23 ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
  • 24 ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.
  • 25 ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
  • 26 ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
  • 27 ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
  • 28 ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
  • 29 ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
  • 30 ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
  • 31 ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
  • 32 ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.
  • 33 ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.
  • 34 ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
  • 35 ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.
  • 36 ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.
  • 37 ಆಗ ಅಲ್ಲಿ ದೊಡ್ಡ ಬಿರುಗಾಳಿಯಿಂದ ತುಫಾನು ಎದ್ದು ತೆರೆಗಳು ದೋಣಿಯೊಳಕ್ಕೆ ಬಡಿದದ್ದರಿಂದ ಅದು ತುಂಬಿಕೊಂಡಿತು.
  • 38 ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.
  • 39 ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
  • 40 ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.
  • 41 ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.